ಖಜಾನೆ-2 ಬಗ್ಗೆ

ರಾಜ್ಯ ಸರ್ಕಾರದ ಎಲ್ಲಾ ಆರ್ಥಿಕ ವಹಿವಾಟುಗಳನ್ನು ಅನುಕಲನಗೊಳಿಸಲು ಹಾಗೂ ಸ್ವಯಂ ಚಾಲಿತಗೊಳಿಸುವ ದೃಷ್ಟಿಯಿಂದ ಆರ್ಥಿಕ ಇಲಾಖೆ (ಕರ್ನಾಟಕ ಸರ್ಕಾರ) ಯು ಖಜಾನೆ-2 ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಖಜಾನೆ-2 ಯೋಜನೆಯು ಒಳ ಮತ್ತು ಬಾಹ್ಯ ಭಾಗೀದಾರರಾದ ರಾಜ್ಯ ಸರ್ಕಾರಿ ಇಲಾಖೆಗಳು, ಆರ್.ಬಿ.ಐ, ಮಹಾಲೇಖಪಾಲರ ಕಚೇರಿ, ಬ್ಯಾಂಕುಗಳು, ಅಂಚೆ ಕಚೇರಿಗಳು, ಸಿಪಿಎಸ್ಎಂಎಸ್, ಹೆಚ್.ಆರ್.ಎಂ.ಎಸ್, ಸಾಮಾಜಿಕ ಭದ್ರತಾ ಪಿಂಚಣಿಗಳ ನಿರ್ದೇಶನಾಲಯ ಮುಂತಾದವುಗಳಿಗೆ ಅನುಕಲನಗೊಳಿಸಲು ಒಂದು ಸಾಮಾನ್ಯ ವಿದ್ಯುನ್ಮಾನ ವೇದಿಕೆಯನ್ನು ಒದಗಿಸುತ್ತದೆ. ಖಜಾನೆ-2ರಲ್ಲಿ ಇಲಾಖೆಗಳು ತಮ್ಮ ಆರ್ಥಿಕ ಚಟುವಟಿಕೆಗಳನ್ನು ಅಂದರೆ, ಬಿಲ್ಲುಗಳನ್ನು ತಯಾರಿಸುವುದು (Bill Preparation), ಬಿಲ್ಲುಗಳನ್ನು ಖಜಾನೆಗಳಿಗೆ ಸಲ್ಲಿಸುವುದು (Bill Submission), ಅನುದಾನ ಬಿಡುಗಡೆ ಹಾಗೂ ಆಯವ್ಯಯ ನಿಯಂತ್ರಣ (Budget Release and Control), ಜಮೆಗಳನ್ನು ಸಂದಾಯಮಾಡುವುದು (Remittances), ಠೇವಣಿಗಳ ನಿರ್ವಹಣೆ (Deposits), ಹಾಗೂ ಜಮೆ ಮತ್ತು ವೆಚ್ಚಗಳ ಲೆಕ್ಕ ಸಮನ್ವಯೀಕರಣ (Reconciliation), ಮುಂತಾದ ಚಟುವಟಿಕೆಗಳನ್ನು ಮುಖ್ಯ ನಿಯಂತ್ರಣಾಧಿಕಾರಿಗಳು (CCO), ನಿಯಂತ್ರಣಾಧಿಕಾರಿಗಳು (CO), ಹಾಗೂ ಡಿಡಿಓ (DDO) ರವರು ನಿರ್ವಹಿಸಬೇಕಾಗುತ್ತದೆ. ಖಜಾನೆ-2ರ ಬಳಕೆದಾರರು ಇದಕ್ಕಾಗಿ ಕೆಲವೊಂದು ಪೂರ್ವ ಅವಶ್ಯಕತೆಗಳಾದ ಖಜಾನೆ-2ರಲ್ಲಿ ನೋಂದಣಿಯಾಗುವುದು, ಬಯೋಮೆಟ್ರಿಕ್ ನೋಂದಣಿಯಾಗುವುದು, ಡಿ.ಎಸ್.ಸಿಯನ್ನು ಪಡೆಯುವುದು ಹಾಗೂ ನಿರ್ವಹಿಸುವುದು, ಸಿಬ್ಬಂದಿ ಬಲ ವಿವರಗಳನ್ನು ಖಜಾನೆಗೆ ನೀಡಿ ಪಾತ್ರಗಳನ್ನು ಹಂಚುವುದು, ಹಾಗೂ ಖಜಾನೆ-2 ನ್ನು ಬಳಸಲು ಡೆಸ್ಕ್ ಟಾಪ್ ಗಳ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಸರ್ಕಾರದ ನೌಕರರು ಖಜಾನೆ-2ರಲ್ಲಿ ನೋಂದಣಿಯಾಗಿ ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ನಿರ್ವಹಿಸಲು ಅಗತ್ಯವಾದ ಮಾಹಿತಿಗಳನ್ನು ಒಂದೇ ಕಡೆ ಲಭ್ಯಗೊಳಿಸಲು “ನಮ್ಮ ಖಜಾನೆ-2” ಪೋರ್ಟಲ್ಅನ್ನು ಅಭಿವೃದ್ಧಿಗೊಳಿಸಲಾಗಿದೆ. ಬಳಕೆದಾರರು ಸರಿಯಾದ ಹಾಗೂ ಸಮರ್ಥವಾದ ರೀತಿಯಲ್ಲಿ ಆರ್ಥಿಕ ಚಟುವಟಿಕೆಗಳನ್ನು ಖಜಾನೆಗಳ ಮೂಲಕ ನಿರ್ವಹಿಸಲು ಪ್ರತಿ ಹಂತದ ಮಾಹಿತಿ ಹಾಗೂ ಅನುಸರಿಸಬೇಕಾದ ವಿಧಾನಗಳನ್ನು ಈ ಪೋರ್ಟಲ್ ಒದಗಿಸುತ್ತದೆ. ಖಜಾನೆ-2ರಲ್ಲಿ ಬಳಕೆದಾರರು ಯಶಸ್ವಿಯಾಗಿ ಚಟುವಟಿಕೆಗಳನ್ನು ನಿರ್ವಹಿಸಲು ಅಗತ್ಯವಾದ ಮಾಹಿತಿಗಾಗಿ ವಿಷಯಾಧಾರಿತ ಪ್ರಶ್ನೋತ್ತರಗಳು, ಪೂರಕವಾದ ವೀಡಿಯೋ ಪಾಠಗಳು, ಪ್ರಕ್ರಿಯೆ ಕೈಪಿಡಿಗಳು, ಫ್ಲೋ ಚಾರ್ಟ್ ಗಳು ಹಾಗೂ ಸಂಬಂಧಿಸಿದ ಸುತ್ತೋಲೆ, ಹಾಗೂ ಸರ್ಕಾರದ ಆದೇಶಗಳನ್ನು ಒದಗಿಸಲಾಗಿದೆ. ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ಈ ಪೋರ್ಟಲ್ ಲಭ್ಯವಿರುತ್ತದೆ.